ಕ್ರಿಸ್ತದನಿ
ಇದು ನಮ್ಮ ನಿಮ್ಮೆಲ್ಲರ ದೈನಂದಿನ ಆಧ್ಯಾತ್ಮಕ್ಕೆ ಪೂರಕವಾಗಲೆಂಬ ಆಶಯದೊಂದಿಗೆ ರೂಪುಗೊಂಡಿದೆ. 'ಕ್ರಿಸ್ತದನಿ' ಯೂಟ್ಯೂಬ್ ಚಾನಲ್ನಲ್ಲಿ ಕಥೋಲಿಕ ಕ್ರೈಸ್ತರು ಪ್ರತಿನಿತ್ಯ ಮಾಡುವಂತಹ ಪ್ರಾರ್ಥನೆಗಳು, ಪ್ರತಿದಿನದ ಬಲಿಪೂಜೆಯ ವಾಚನಗಳ ಆಧಾರಿತ ಪ್ರಬುದ್ಧ ಚಿಂತನೆಗಳು, ಜಪಸರ, ಶಿಲುಬೆಹಾದಿ, ಆರಾಧನೆ, ಕ್ರೈಸ್ತ ಧಾರ್ಮಿಕ ಭಕ್ತಿಗೀತೆಗಳು ಮುಂತಾದವು ಇವೆ. ಇವೆಲ್ಲವೂ ನಮ್ಮ ಆಧ್ಯಾತ್ಮಿಕ ಪ್ರಯಾಣದಲ್ಲಿ ನೆರವಾಗಲೆಂಬುದೇ ನಮ್ಮ ಆಶಯ. ಇವನ್ನು ಕ್ರೋಢೀಕರಿಸಿ ಯೂಟ್ಯೂಬ್ ಚಾನಲ್ನಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ಕನ್ನಡ ಕಥೋಲಿಕ ಧರ್ಮಸಭೆಗೆ ಹೊಸದು. ಕ್ರಿಸ್ತನ ನುಡಿಗೆ ಉತ್ಕೃಷ್ಟ ದನಿಯಾಗುವ ಪ್ರಯತ್ನದ ಫಲವಿದು. ಇದನ್ನು ಬಳಸುತ್ತಾ ಉತ್ತಮವಾಗಿಸುವ ಯತ್ನದಲ್ಲಿ ನಿಮ್ಮ ಅನಿಸಿಕೆಗಳು ನಮಗೆ ಉತ್ತೇಜನಕಾರಿ. ನಿಮ್ಮ ಅಭಿಪ್ರಾಯಗಳನ್ನು ನಮಗೆ ಮುಕ್ತವಾಗಿ ತಿಳಿಸಿ ಕ್ರಿಸ್ತದನಿಯ ಉತ್ತಮಿಕೆಯಲ್ಲಿ ನೆರವಾಗಿರಿ.
Disclaimer: The content mentioned in this You Tube is only for religious purpose and we do not have any trade or business intention. We are not the real owners of all the contents, and it is only compilation of religious contents from different sources for the benefit of people. For any copyright issues, contact - kristadani2311@gmail.com


Krista Dani

0️⃣8️⃣-0️⃣6️⃣-2️⃣6️⃣
*ಜೂನ್*
0️⃣8️⃣
*ಸೋಮವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಹತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 279)*
*ಪೂಜಾವಿಧಿ ವರ್ಷ 2*
*ಕೀರ್ತನಾ ಮಂಜರಿ:ವಾರ 2*
*ಪೂಜಾವಸ್ತ್ರ ಹಸಿರು*
*ಸಂತ ಮರಿಯಮ್*
*ಥ್ರೆಸಿಯಾ ಜಿರಮೆಲ್*
*(ಕನ್ಯೆ)*
*(ವಯಸ್ಸು - 50)*
*(1876-1926)*
*(ಕೇರಳ - ಭಾರತ)*
🟨🌻🙏✝️🙏🌻🟨

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಅರಸುಗಳ ಮೊದಲನೆಯ ಪತ್ರದಿಂದ ಇಂದಿನ ವಾಚನ 17: 1-6*

*"ಎಲೀಯನು ಇಸ್ರಯೇಲರ ದೇವರ ಮುಂದೆ ನಿಂತಿರುತ್ತಾನೆ."*

ಗಿಲ್ಯಾದಿನ ಪವಾಸಿಗಳಲ್ಲಿ ತಿಷ್ಬೀಯನಾದ ಎಲೀಯ ಎಂಬವನು ಅಹಾಬನಿಗೆ, "ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಯೇಲ್ ದೇವರಾದ ಸರ್ವೇಶ್ವರನಾಣೆ, ನಾನು ಸೂಚಿಸಿದ ಹೊರತು, ಇಂದಿನಿಂದ ಕೆಲವು ವರ್ಷಗಳವರೆಗೆ ಮಳೆಯಾಗಲಿ, ಮಂಜಾಗಲಿ ಬೀಳುವುದಿಲ್ಲ," ಎಂದನು. ಸರ್ವೇಶ್ವರಸ್ವಾಮಿ ಎಲೀಯನಿಗೆ, "ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗು; ಜೋರ್ಡನ್ ನದಿಯ ಆಚೆಯಿರುವ ಕೇರಿತ್ ಹಳ್ಳದಲ್ಲಿ ಅಡಗಿಕೋ. ಆ ಹಳ್ಳದ ನೀರು ನಿನಗೆ ಪಾನವಾಗಿರುವುದು; ನಿನಗೆ ಆಹಾರ ತಂದುಕೊಡಬೇಕೆಂದು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ," ಎಂದು ಹೇಳಿದರು. ಸರ್ವೇಶ್ವರನ ಅಪ್ಪಣೆಯಂತೆ ಜೋರ್ಡನಿನ ಪೂರ್ವಕ್ಕಿರುವ ಕೇರಿತ್ ಹಳ್ಳದಲ್ಲಿ ಅವನು ವಾಸಿಸಿದನು. ಕಾಗೆಗಳು ಅವನಿಗೆ ಬೆಳಿಗ್ಗೆ ಹಾಗು ಸಂಜೆ ರೊಟ್ಟಿ, ಮಾಂಸ, ಇವುಗಳನ್ನು ತಿನ್ನಲು ತಂದುಕೊಡುತ್ತಿದ್ದವು. ಹಳ್ಳದ ನೀರು ಅವನಿಗೆ ಪಾನವಾಗಿತ್ತು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌻✝️🌻

*ಕೀರ್ತನೆ*
*(121: 1-8, v. 2)*

*ಶ್ಲೋಕ: ನನಗೆ ಒತ್ತಾಸೆ ಪ್ರಭುವಿನಿಂದ.*

1. ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ|
ಕೇಳುವೆ: "ನನಗೆ ಒತ್ತಾಸೆ ಎತ್ತಣಿಂದ?"||
ನನಗೆ ಒತ್ತಾಸೆ ಪ್ರಭುವಿನಿಂದ|
ಭೂಮ್ಯಾಕಾಶ ಸೃಜಿಸಿದವನಿಂದ||
*ಶ್ಲೋಕ*

2. ನಿನ್ನ ಕಾಲೆಡವದಂತೆ ನೋಡುವನಾತ|
ತೂಕಡಿಸಲಾರನು ನಿನ್ನ ಕಾಯುವಾತ||
ಇಗೋ, ಇಸ್ರಯೇಲನು ಕಾಯುವಾತನು|
ನಿದ್ರಿಸಲಾರನು ತೂಕಡಿಸಲಾರನು||
*ಶ್ಲೋಕ*

3. ನಿನ್ನನ್ನು ಕಾಯುತಿಹನು ಪ್ರಭುವೇ|
ಬಲಗಡೆ ನೆರಳಂತಿಹನು ಪ್ರಭುವೇ||
ನಿನ್ನ ಬಾಧಿಸನು ಸೂರ್ಯನು|
ಹಗಲೊಳು ನಿನ್ನ ಪೀಡಿಸನು ಚಂದ್ರನು ಇರುಳೊಳು||
*ಶ್ಲೋಕ*

4. ಪ್ರಭು ಕಾಯುವನು ನಿನ್ನ ಪ್ರಾಣವನು|
ಸಕಲ ಕೇಡಿನಿಂದ ಕಾಪಾಡುವನು||
ಪ್ರಭು ಕಾಯುವನು ನಿನ್ನ ಆಗುಹೋಗುಗಳನು|
ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು||
*ಶ್ಲೋಕ*

🌻✝️🌻

*ಘೋಷಣೆ*
*(ಕೀರ್ತನೆ 119: 135)*

*ಅಲ್ಲೆಲೂಯ, ಅಲ್ಲೆಲೂಯ.*
ತೋರು ನಿನ್ನ ಮುಖದರ್ಶನ ಈ ದಾಸನಿಗೆ| ನೀ ಕಲಿಸು ನಿನ್ನ ನಿಬಂಧನೆಗಳನ್ನು ಎನಗೆ||
*ಅಲ್ಲೆಲೂಯ.*

🌻✝️🌻

*ಶುಭಸಂದೇಶ ವಾಚನ*

*✝️ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ: 5: 1-12*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು."*

ಆ ಕಾಲದಲ್ಲಿ, ಜನರ ದೊಡ್ಡ ಗುಂಪನ್ನು ಕಂಡು ಯೇಸು ಒಂದು ಬೆಟ್ಟವನ್ನು ಹತ್ತಿ ಕುಳಿತುಕೊಂಡರು. ಅವರ ಶಿಷ್ಯರು ಸುತ್ತಲೂ ನೆರೆದರು. ಆಗ ಯೇಸು ಇಂತೆಂದು ಪ್ರಬೋಧಿಸಿದರು:
"ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯ ಅವರದು. ದುಂಖಿಗಳು ಭಾಗ್ಯವಂತರು, ದೇವರು ಅವರನ್ನು ಸಂತೈಸುವರು. ವಿನಯಶೀಲರು ಭಾಗ್ಯವಂತರು, ದೇವರ ವಾಗ್ದತ್ತ ನಾಡಿಗೆ ಬಾಧ್ಯಸ್ಥರು ಅವರು. ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು, ದೇವರು ಅವರಿಗೆ ತೃಪ್ತಿಯನ್ನೀಯುವರು. ದಯಾವಂತರು ಭಾಗ್ಯವಂತರು, ದೇವರ ದಯೆ ಅವರಿಗೆ ದೊರಕುವುದು. ನಿರ್ಮಲ ಹೃದಯಿಗಳು ಭಾಗ್ಯವಂತರು ಅವರು ದೇವರನ್ನು ಕಾಣುವರು. ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು, ಅವರು ದೇವರ ಮಕ್ಕಳೆನಿಸಿಕೊಳ್ಳುವರು.
ನ್ಯಾಯನೀತಿಯ ನಿಮಿತ್ತ ಹಿಂಸೆಯನ್ನು ತಾಳುವವರು ಭಾಗ್ಯವಂತರು, ಸ್ವರ್ಗಸಾಮ್ರಾಜ್ಯ ಅವರದು. ನನ್ನ ಶಿಷ್ಯರು ನೀವಾದ್ದರಿಂದ ಜನರು ನಿಮ್ಮನ್ನು ಧಿಕ್ಕರಿಸುವರು, ಹಿಂಸಿಸುವರು, ಅನ್ಯಾಯವಾಗಿ ಇಲ್ಲಸಲ್ಲದ್ದನ್ನು ನಿಮ್ಮ ಮೇಲೆ ಹೊರಿಸುವರು; ಆಗ ನೀವು ಭಾಗ್ಯವಂತರು. ಅದಕ್ಕಾಗಿ ಹರ್ಷಿಸಿ ಆನಂದಪಡಿ; ಏಕೆಂದರೆ ಸ್ವರ್ಗದಲ್ಲಿ ನಿಮಗೆ ಸಿಗುವ ಪ್ರತಿಫಲ ಹಿರಿದು. ನಿಮಗಿಂತ ಮೊದಲಿದ್ದ ಪ್ರವಾದಿಗಳನ್ನೂ ಜನರು ಹೀಗೆಯೇ ಚಿತ್ರಹಿಂಸೆಗೆ ಒಳಪಡಿಸಿದರು."

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

21 hours ago | [YT] | 24

Krista Dani

0️⃣7️⃣-0️⃣6️⃣-2️⃣6️⃣
*ಜೂನ್*
0️⃣7️⃣
*ಭಾನುವಾರ*
*ಪವಿತ್ರ ಬೈಬಲ್ ದಿನಚರಿ*
*ವರ್ಷದ*
*ಹತ್ತನೇ ಭಾನುವಾರ*
*(ವಾ,ಗ್ರ. ಭಾಗ-2, ಪುಟ 1024)*
*ಪೂಜಾವಿಧಿ ಹಬ್ಬ*
*ಕೀರ್ತನಾ ಮಂಜರಿ:ಹಬ್ಬ*
*ಪೂಜಾವಸ್ತ್ರ ಬಿಳಿ*
*ಪ್ರಭುವಿನ ಪೂಜ್ಯ*
*ಶರೀರ ಮತ್ತು ರಕ್ತದ*
*(ಮಹೋತ್ಸವ)*
🟪🌹🙏✝️🙏🌹🟪

*ದೈವವಾಕ್ಯದ ವಿಧಿ*

*"ದೇವರ ಪ್ರೀತಿಯ ಸಂಕೇತ ಪರಮಪ್ರಸಾದ ಸಂಸ್ಕಾರ"*

*ಮೊದಲನೆಯ ವಾಚನ*

*"ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು."*

ಮೋಶೆ ಇಸ್ರಯೇಲರನ್ನು ಕರೆದು ಅವರಿಗೆ ಹೀಗೆಂದರು: ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗು ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಮಾನವರು ಆಹಾರ ಮಾತ್ರದಿಂದಲ್ಲ, ಸರ್ವೇಶ್ವರ ಆಡುವ ಪ್ರತಿಯೊಂದು ನುಡಿಯಿಂದಲೂ ಜೀವಿಸುತ್ತಾರೆಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು. ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ! ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷ ಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾ ಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು; ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌹✝️🌹

*ಕೀರ್ತನೆ*
*147: 12-15, 19-20, v. 12*

*ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು*

1. ಜೆರುಸಲೇಮೇ, ಕೀರ್ತಿಸು ಪ್ರಭುವನು|
ಸಿಯೋನೇ, ಸ್ತುತಿಸು ನಿನ್ನ ದೇವರನು||
ಬಲಪಡಿಸಿಹನಾತ ನಿನ್ನ ಹೆಬ್ಬಾಗಿಲುಗಳನು|
ಆಶೀರ್ವದಿಸಿಹನು ನಿನ್ನಲಿರುವ ಮಕ್ಕಳನು||
*ಶ್ಲೋಕ*

2. ನಿನ್ನ ಪ್ರಾಂತದೊಳಗೆಲ್ಲ ಇರುವುದು ನೆಮ್ಮದಿ|
ನೀಡುವನು ನಿನಗೆ ಅತ್ಯುತ್ತಮ ಗೋದಿ||
ಕಳಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದದು ಬಲು ಶೀಘ್ರದಿ||
*ಶ್ಲೋಕ*

3. ತಿಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ|
ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ||
ಬೇರಾವ ಜನಾಂಗಕೂ ಆತ ಹೀಗೆ ಮಾಡಿಲ್ಲ|
ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ||
*ಶ್ಲೋಕ*

🌹✝️🌹

*ಎರಡನೆಯ ವಾಚನ*

*🛐ಪೌಲನು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 10: 16-17*

*"ರೊಟ್ಟಿ ಒಂದೇ; ಆದ್ದರಿಂದ ನಾವು ಆನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ, ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ."*

ಸಹೋದರರೇ, ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತ ಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತ ಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿ ಒಂದೇ; ಆದ್ದರಿಂದ ನಾವು ಆನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ, ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌹✝️🌹

*ಘೋಷಣೆ*
*(ಯೊವಾನ್ನ 6: 51)*

*ಅಲ್ಲೆಲೂಯ, ಅಲ್ಲೆಲೂಯ.*
ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ; ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ.
*ಅಲ್ಲೆಲೂಯ*

🌹✝️🌹

*ಶುಭಸಂದೇಶ*

*✝️ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 6: 51-58*

*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*

*"ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ "*

ಆ ಕಾಲದಲ್ಲಿ ಯೇಸು ಜನರಿಗೆ ಬೋಧಿಸುತ್ತಾ: "ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ," ಎಂದು ಹೇಳಿದರು. ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. "ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?" ಎಂದು ಕೇಳತೊಡಗಿದರು. ಅದಕ್ಕೆ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯ ಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ, ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು 'ಮನ್ನಾ'ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು," ಎಂದು ಹೇಳಿದರು.

*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*

ಆಮೆನ್

2 days ago | [YT] | 18

Krista Dani

0️⃣6️⃣-0️⃣6️⃣-2️⃣6️⃣
*ಜೂನ್*
0️⃣6️⃣
*ಶನಿವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಭತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 267)*
*ಪೂಜಾವಿಧಿ ವರ್ಷ 2*
*ಕೀರ್ತನಾ ಮಂಜರಿ; ವಾರ 1*
*ಪೂಜಾವಸ್ತ್ರ ಹಸಿರು*
*ಕ್ಸಾಂಟೆನ್ ನ*
*ಸಂತ ನಾರ್ಬರ್ಟ್*
*(ಧರ್ಮಾಧ್ಯಕ್ಷ)*
*(ವಯಸ್ಸು - 54)*
*(1080-1134)*
🟨🌻🙏✝️🙏🌻🟨

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೌಲನು ತಿಮೋಥೇಯನಿಗೆ ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 4: 1-8*

*"ನೀನು ದೇವರ ವಾಕ್ಯವನ್ನು ಬೋಧಿಸು. ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ."*

ಪ್ರಿಯ ಪುತ್ರ ತಿಮಥೇಯನೇ, ದೇವರ ಸಮಕ್ಷಮದಲ್ಲಿ, ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರ್ಪನ್ನು ಕೊಡಲು ಬರುವ ಕ್ರಿಸ್ತ ಯೇಸುವಿನ ಸಮಕ್ಷಮದಲ್ಲಿ, ನಾನು ಅವರ ಪ್ರತ್ಯಕ್ಷತೆಯನ್ನೂ ಸಾಮ್ರಾಜ್ಯವನ್ನೂ ಮುಂದಿಟ್ಟು ನಿನಗೆ ಆಜ್ಞಾಪಿಸುವುದೇನೆಂದರೆ: ನೀನು ದೇವರ ವಾಕ್ಯವನ್ನು ಆಸಕ್ತಿಯಿಂದ ಕಾಲ ಆಕಾಲಗಳನ್ನು ಲೆಕ್ಕಿಸದೆ ಬೋಧಿಸು. ಸತ್ಯವನ್ನು ಮನಗಾಣಿಸು; ತಪ್ಪನ್ನು ತಿದ್ದು; ಒಳ್ಳೆಯದನ್ನು ಪ್ರೋತ್ಸಾಹಿಸು; ತಾಳ್ಮೆಯನ್ನು ಕಳೆದುಕೊಳ್ಳದೆ ಉಪದೇಶ ಮಾಡು. ಜನರು ಸುದ್ಬೋಧನೆಯನ್ನು ಸಹಿಸದೆ, ಸ್ಟೇಚ್ಛಾಚಾರಿಗಳಾಗುವ ಕಾಲವು ಬರುತ್ತದೆ. ತಮ್ಮ ದುರಿಚ್ಛೆಗಳಿಗೆ ಅನುಗುಣವಾಗಿ ಬೋಧಿಸುವವರಿಗೆ ಕಾತರದಿಂದ ಕಿವಿಗೊಡಲು ಕೂಡಿಕೊಳ್ಳುತ್ತಾರೆ. ಸತ್ಯಕ್ಕೆ ಕಿವಿಗೊಡದೆ ಕಟ್ಟುಕತೆಗಳನ್ನು ಕೇಳಲು ಅಲೆದಾಡುತ್ತಾರೆ. ಆದರೆ, ನೀನು ಎಲ್ಲ ಸನ್ನಿವೇಶಗಳಲ್ಲೂ ಸ್ಥಿರಚಿತ್ತದಿಂದಿರು. ಕಷ್ಟವನ್ನು ಸಹಿಸಿಕೋ. ಶುಭಸಂದೇಶವನ್ನು ಸರಿಯಾಗಿ ನಿರ್ವಹಿಸು. ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿ ಬಂದಿದೆ. ಬಾಳಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ. ನನ್ನ ಓಟವನ್ನು ಮುಗಿಸಿದ್ದೇನೆ. ವಿಶ್ವಾಸವನ್ನು ಕಾಪಾಡಿಕೊಂಡಿದ್ದೇನೆ. ಇನ್ನು ನನಗೆ ಉಳಿದಿರುವುದು ಒಂದೇ. ಸಜ್ಜನರಿಗೆ ಸಲ್ಲುವಂಥ ಜಯಮಾಲೆ ನನಗೀಗ ಸಿದ್ಧವಾಗಿದೆ. ಅದನ್ನು ನೀತಿವಂತ ನ್ಯಾಯಾಧಿಪತಿಯಾದ ಪ್ರಭು ಆ ದಿನದಂದು ನನಗೆ ಕೊಡುವರು; ನನಗೆ ಮಾತ್ರವಲ್ಲ, ಅವರ ಪ್ರತ್ಯಕ್ಷತೆಯನ್ನು ಪ್ರೀತಿಯಿಂದ ನಿರೀಕ್ಷಿಸುತ್ತಿರುವ ಎಲ್ಲರಿಗೂ ಕೊಡುವರು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌻✝️🌻

*ಕೀರ್ತನೆ*
*71: 8-9, 15-16, 17, 22, v. 15*

*ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು*

1. ನಿನ್ನ ಗುಣಗಾನ ನನ್ನ ಬಾಯ್ತುಂಬ|
ನಿನ್ನ ಘೋಷಣೆ ನನಗೆ ದಿನದಾದ್ಯಂತ||
ವೃದ್ದಾಪ್ಯದಲಿ ನನ್ನ ತಳ್ಳಿಬಿಡಬೇಡಯ್ಯಾ|
ಶಕ್ತಿ ಕುಂದುತ್ತಿರುವಾಗ ಕೈ ಬಿಡಬೇಡಯ್ಯಾ||
*ಶ್ಲೋಕ*

2. ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು|
ವಿವರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು|
ಸ್ವಾಮಿದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ||
ದೇವಾ, ಬಾಲ್ಯಾರಭ್ಯ, ನನಗೆ ಬೋಧಿಸಿರುವೆಯಲ್ಲವೆ? |
ನಿನ್ನ ಅದ್ಭುತ ಕಾರ್ಯಗಳನೆಂದಿಗೂ ನಾ ಘೋಷಿಸುತ್ತಿರುವೆ||
*ಶ್ಲೋಕ*

3. ನಿನ್ನ ಸತ್ಯತೆಗಾಗಿ ಓ ಎನ್ನ ದೇವಾ|
ಕಿನ್ನರಿಯನು ನುಡಿಸುತಾ ಭಜಿಸುವೆನಯ್ಯಾ||
ಇಸ್ರಯೇಲಿನ ಆ ಪರಮ ಪಾವನ ಪ್ರಭುವಿನ|
ವೀಣೆ ವಾದ್ಯದೊಂದಿಗೆ ಕೀರ್ತಿಸುವೆನಯ್ಯಾ||
*ಶ್ಲೋಕ*

🌻✝️🌻

*ಘೋಷಣೆ*
*(ಕೀರ್ತನೆ 119: 105)*

*ಅಲ್ಲೆಲೂಯ, ಅಲ್ಲೆಲೂಯ!*
ನಿನ್ನ ವಾಕ್ಯ ನನಗೆ ದಾರಿ ದೀಪ| ನನ್ನ ಕಾಲಿನ ನಡೆಗೆ ಕೈ ದೀಪ||
*ಅಲ್ಲೆಲೂಯ!*

🌻✝️🌻

*ಶುಭಸಂದೇಶ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12: 38-44*

*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*

*"ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು"*

ಆ ಕಾಲದಲ್ಲಿ ಜನಸಮೂಹವು ಸಂತಸಚಿತ್ತದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, "ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠ ಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧೆವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು," ಎಂದರು. ಯೇಸು ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳಿಗೆ ಎದುರಾಗಿ ಕುಳಿತ್ತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆ ಒಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, "ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ; ಇವರೆಲ್ಲರೂ ತಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು," ಎಂದರು.

*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*

ಆಮೆನ್

2 days ago | [YT] | 18

Krista Dani

0️⃣5️⃣-0️⃣6️⃣-2️⃣6️⃣
*ಜೂನ್*
0️⃣5️⃣
*ಶುಕ್ರವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಬತ್ತನೆಯ ವಾರ*
*(ತಿಂಗಳ ಮೊದಲನೇ ಶುಕ್ರವಾರ)*
*(ವಾ, ಗ್ರ. ಭಾಗ-1. ಪುಟ 263)*
*ಪೂಜಾವಿಧಿ; ವರ್ಷ 2*
*ಕೀರ್ತನಾ ಮಂಜರಿ; ವಾರ 1*
*ಪೂಜಾವಸ್ತ್ರ ಕೆಂಪು*
*ಸಂತ ಬೋನಿಫೇಸ್*
*(ಧರ್ಮಾಧ್ಯಕ್ಷ/ರಕ್ತಸಾಕ್ಷಿ)*
*(ವಯಸ್ಸು - 79)*
*(0675-0754)*
🟥🌺🙏✝️🙏🌺🟥

*ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೌಲನು ತಿಮೋಥೇಯನಿಗೆ ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 3: 10-17*

*"ಕ್ರಿಸ್ತ ಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ"*

ನೀನಾದರೋ ನನ್ನ ಬೋಧನೆ, ನಡತೆ ಹಾಗೂ ಧ್ಯೇಯಗಳನ್ನು ಅರಿತಿರುವೆ. ನನ್ನ ವಿಶ್ವಾಸ, ಸಹಿಷ್ಣುತೆ ಮತ್ತು ಸೈರಣೆ ನಿನಗೆ ತಿಳಿದಿದೆ. ನಾನು ಅನುಭವಿಸಿದ ಹಿಂಸೆ ನೋವುಗಳ ಮತ್ತು ಕಷ್ಟ ದುಃಖಗಳ ಕುರಿತು ಕೇಳಿರುವೆ. ಅಂತಿಯೋಕ್ಯ, ಇಕೋನಿಯ ಮತ್ತು ಲುಸ್ತ್ರ ಪಟ್ಟಣಗಳಲ್ಲಿ ನಾನು ಎಂಥ ಕ್ರೂರವಾದ ಹಿಂಸೆ ಅನುಭವಿಸಿದೆನೆಂಬುದು ನಿನಗೆ ತಿಳಿಯದ ವಿಷಯವೇನೂ ಅಲ್ಲ. ಆದರೆ ಪ್ರಭು ನನ್ನನ್ನು ಇವೆಲ್ಲವುಗಳಿಂದ ಪಾರುಮಾಡಿದರು. ಕ್ರಿಸ್ತ ಯೇಸುವಿನ ಅನುಯಾಯಿಯಾಗಿ ಭಕ್ತಿಯಿಂದ ಬಾಳಲು ಆಶಿಸುವ ಪ್ರತಿಯೊಬ್ಬನೂ ಹಿಂಸೆಗೊಳಗಾಗುತ್ತಾನೆ. ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇ ದಿನೇ ಅಧೋಗತಿಗಿಳಿಯುತ್ತಾರೆ. ನೀನಾದರೋ ನಿನಗೆ ಬೋಧಿಸಲಾಗಿರುವ ಹಾಗೂ ನೀನು ದೃಢವಾಗಿ ನಂಬಿರುವ ಸತ್ಯಗಳನ್ನು ಅನುಸರಿಸು. ನಿನ್ನ ಬೋಧಕರು ಯಾರೆಂಬುದು ನಿನಗೆ ಗೊತ್ತಿದೆ. ಚಿಕ್ಕಂದಿನಿಂದಲೇ ನೀನು ಪವಿತ್ರ ಗ್ರಂಥವನ್ನು ಪರಿಚಯಮಾಡಿಕೊಂಡಿರುವೆ. ಯೇಸು ಕ್ರಿಸ್ತರನ್ನು ವಿಶ್ವಾಸಿಸುವುದರ ಮೂಲಕ ಜೀವೋದ್ಧಾರವನ್ನು ಪಡೆಯಬಹುದೆಂಬ ಜ್ಞಾನವು ಲಭಿಸುವುದು ಆ ಪವಿತ್ರ ಗ್ರಂಥದಿಂದಲೇ. ಪವಿತ್ರ ಗ್ರಂಥ ದೈವಪ್ರೇರಣೆಯಿಂದ ರಚಿತವಾದುದು. ಆದ್ದರಿಂದ ಅದು ಪ್ರಬೋಧನೆಗೂ ಖಂಡನೆಗೂ ತಿದ್ದುಪಾಟಿಗೂ ನೀತಿಬೋಧೆಗೂ ಉಪಯುಕ್ತವಾಗಿದೆ. ಅದರ ಮೂಲಕ ದೈವಭಕ್ತರು ಸಿದ್ಧರೂ ಸಕಲ ಸತ್ಕಾರ್ಯಗಳಿಗೆ ಸನ್ನದ್ಧರೂ ಆಗಬಲ್ಲರು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌺✝️🌺

*ಕೀರ್ತನೆ* 119: 157, 160, 161, 165, 166, 168, v. 165*

*ಶ್ಲೋಕ: ಅತಿ ನೆಮ್ಮದಿಯುಂಟು ನಿನ್ನ ಶಾಸ್ತ್ರಪ್ರಿಯರಿಗೆ "*

1. ದ್ವೇಷಿಸಿದರು, ಹಿಂಸಿಸಿದರು, ಹಲವರು ನನ್ನನು|
ಆದರೂ ಬಿಟ್ಟಿಲ್ಲ ನಾನು ನಿನ್ನ ಕಟ್ಟಳೆಗಳನು||
ಸತ್ಯವೇ ನಿನ್ನ ವಾಕ್ಯದ ಸಾರಾಂಶ|
ನಿನ್ನಯ ನೀತಿ ವಿಧಿಗಳೆಲ್ಲವೂ ಅನಿಶ||
*ಶ್ಲೋಕ*

2. ಪೀಡಿಸುತಿಹರು ನಿಷ್ಕಾರಣವಾಗಿ ರಾಜರುಗಳು||
ನಿನ್ನ ವಾಕ್ಯದ ಭೀತಿ ಇಹುದು ನನ್ನ ಹೃದಯದೊಳು||
ವಿಘ್ನಕರವಾದುದೇನೂ ಇರದು ಅಂಥವರಿಗೆ|
ನಿನ್ನ ಕಟ್ಟಳೆಗಳು ನನಗೆ ಅಧಿಕ ಪ್ರಿಯ||
*ಶ್ಲೋಕ*

3. ರಕ್ಷಣೆಯನು ಪ್ರಭೂ, ನಿರೀಕ್ಷಿಸುತ್ತಿರುವೆ |
ನಿನ್ನ ಆಜ್ಞೆಗಳನ್ನು ನಾನು ಕೈಗೊಂಡಿರುವೆ||
ಅನುಸರಿಸಿದೆ ನಿನ್ನ ನೇಮ ನಿಯಮಗಳನೆಲ್ಲ|
ನಿನಗೆ ಬಟ್ಟಬಯಲು ನನ್ನ ನಡತೆಯೆಲ್ಲ||
*ಶ್ಲೋಕ*

🌺✝️🌺

*ಘೋಷಣೆ*
*(ಕೀರ್ತನೆ 119: 135)*

*ಅಲ್ಲೆಲೂಯ ಅಲ್ಲೆಲೂಯ!*
ತೋರು ನಿನ್ನ ಮುಖದರ್ಶನ ಈ ದಾಸನಿಗೆ| ನೀ ಕಲಿಸು ನಿನ್ನ ನಿಬಂಧನೆಗಳನ್ನು ಎನಗೆ||
*ಅಲ್ಲೆಲೂಯ!*

🌺✝️🌺

*ಶುಭಸಂದೇಶ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12: 35-37*

*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*

*"ಅಭಿಷಿಕ್ತರಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು 'ದಾವೀದನ ಪುತ್ರ' ಎಂದು ಕರೆಯುತ್ತಾರಲ್ಲಾ! ಅದು ಹೇಗಾದೀತು?*

ಆ ಕಾಲದಲ್ಲಿ ಯೇಸು ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಈ ಪ್ರಶ್ನೆ ಎತ್ತಿದರು: "ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು 'ದಾವೀದನ ಪುತ್ರ' ಎಂದು ಕರೆಯುತ್ತಾರಲ್ಲಾ! ಅದು ಹೇಗಾದೀತು? 'ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,' ಎಂದು ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದಾನಲ್ಲಾ! ದಾವೀದನೇ, ಕ್ರಿಸ್ತನನ್ನು "ನನ್ನ ಪ್ರಭು" ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?" ಎಂದು ಪ್ರಶ್ನಿಸಿದರು.

*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ*

ಆಮೆನ್

4 days ago | [YT] | 20

Krista Dani

0️⃣4️⃣-0️⃣6️⃣-2️⃣6️⃣
*ಜೂನ್*
0️⃣4️⃣
*ಗುರುವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಬತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 260)*
*ಪೂಜಾವಿಧಿ ವರ್ಷ -2*
*ಕೀರ್ತನಾ ಮಂಜರಿ; ವಾರ 1*
*ಪೂಜಾವಸ್ತ್ರ ಹಸಿರು*
*ಮಾರ್ಸಿಯಾನೊದ*
*ಪುನೀತ ಏಂಜೆಲಿನ್*
*(ಧಾರ್ಮಿಕ)*
*(ವಯಸ್ಸು -58)*
*(1377-1435)*
🟪🌹🙏✝️🙏🌹🙏🟪

*ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 2: 8-15*

*"ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ."*

ಪ್ರಿಯ ಪುತ್ರನೇ, ಕ್ರಿಸ್ತ ಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತ ಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ:
ನಾವು ಆತನೊಡನೆ ಸತ್ತಿದ್ದರೆ, ಆತನೊಡನೆ ಜೀವಿಸುತ್ತೇವೆ;
ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ;
ನಾವಾತನನ್ನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ.
ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ;
ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ.
ಈ ವಿಷಯಗಳನ್ನು ನಿನ್ನ ಸಭಿಕರಿಗೆ ಜ್ಜಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು. ನೀವಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ, ಬಾಳಲು ಪ್ರಯತ್ನಪಡು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌹✝️🌹

*ಕೀರ್ತನೆ*
*(25: 4-5, 8-9, 10, 14, v. 4)*

*ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು.*

1. ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು|
ನೀನೋಪ್ಪುವ ಪಥದಲಿ ನಾ ನಡೆಯ ಕಲಿಸು||
ಸನ್ಮಾರ್ಗದಲಿ ಮುನ್ನಡೆಸೆನ್ನಾ ದೇವಾ, ಮುಕ್ತಿದಾತ|
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ||
*ಶ್ಲೋಕ*

2. ಸತ್ಯಸ್ವರೂಪನು, ದಯಾವಂತನು ಪ್ರಭು|
ದಾರಿತಪ್ಪಿದವರಿಗೆ ಬೋಧಕನು ವಿಭು||
ದೀನರನು ನಡೆಸುವನು ತನ್ನ ವಿಧಿಗನುಸಾರ|
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ||
*ಶ್ಲೋಕ*

3. ಪ್ರಭುವಿನೊಪ್ಪಂದಗಳ ಪಾಲಕರಿಗೆ ಆತನ ಮಾರ್ಗಗಳು ಸನ್ನುತ|
ಆತನ ವಿಧಿ ನಿಬಂಧನೆಗಳು ಪರಿಪಾಲಕರಿಗೆ ಅವುಗಳು ಸುಪ್ರೀತ||
ಪ್ರಭುವಿನ ಮೈತ್ರಿ, ಭಯಭಕ್ತಿಯುಳ್ಳವರಿಗೆ|
ಅಂಥವರಿಗೆ ವ್ಯಕ್ತ, ಆತನ ಒಡಂಬಡಿಕೆ||
*ಶ್ಲೋಕ*

🌹✝️🌹

*ಘೋಷಣೆ*
*(119: 27)*

*ಅಲ್ಲೆಲೂಯ, ಅಲ್ಲೆಲೂಯ!*
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ | ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ ||
*ಅಲ್ಲೆಲೂಯ!*

🌹✝️🌹

*ಶುಭಸಂದೇಶ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12: 28-34*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣಹೃದಯದಿಂದ ಪ್ರೀತಿಸು ನಿನ್ನನ್ನೇ ನೀನು ಪ್ರೀತಿಸುವಂತೆ ನಿನ್ನ ನೆರೆಯವನನ್ನು ಪ್ರೀತಿಸು. " ‍ ‍
ಆ ಕಾಲದಲ್ಲಿ ಧರ್ಮಶಾಸ್ತ್ರಿಯೊಬ್ಬನು, ಯೇಸು ಸದ್ದುಕಾಯಕರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, "ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು? " ಎಂದು ಕೇಳಿದನು. ಯೇಸು ಅವನಿಗೆ, "ಇಸ್ರಯೇಲ್ ಸಮಾಜವೇ ಕೇಳು:
ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ, " ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, "ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದು. ಇವು ಎಲ್ಲಾ ದಹನ ಬಲಿಗಳಿಗಿಂತಲೂ ಯಜ್ಞ ಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು," ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ," ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆಳ್ಳ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

4 days ago | [YT] | 22

Krista Dani

0️⃣3️⃣-0️⃣6️⃣-2️⃣6️⃣
*ಜೂನ್*
0️⃣3️⃣
*ಬುಧವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಬತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 255)*
*ಪೂಜಾವಿಧಿ ವರ್ಷ-2*
*ಕೀರ್ತನಾ ಮಂಜರಿ ವಾರ 1*
*ಪೂಜಾವಸ್ತ್ರ ಕೆಂಪು*
*ಸಂತ ಚಾರ್ಲ್ಸ್ ಲ್ವಾಂಗಾ*
*ಮತ್ತು*
*22 ಸಹಚರರು*
*(ಉಗಾಂಡದ ರಕ್ತಸಾಕ್ಷಿಗಳು)*
🟧🌻🙏✝️🙏🌻🟧

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೌಲನು ತಿಮೊಥೇಯನಿಗೆ ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 1: 1-3, 6-12*

*"ನಾನು ನಿನ್ನ ಮೇಲೆ ಹಸ್ತನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡು."*

ನನ್ನ ಪ್ರೀತಿಯ ಪುತ್ರ ತಿಮೊಥೇಯನಿಗೆ ಪೌಲನು ಬರೆಯುವ ಪತ್ರ. ಕ್ರಿಸ್ತ ಯೇಸುವಿನಲ್ಲಿರುವವರಿಗೆ ಲಭಿಸುವ ಅಮರ ಜೀವದ ವಾಗ್ದಾನವನ್ನು ಸಾರಲು ದೈವಚಿತ್ತಾನುಸಾರ ಪ್ರೇಷಿತನಾದ ನಾನು ತಿಳಿಸುವುದೇನೆಂದರೆ: ಪಿತನಾಗಿರುವ ದೇವರೂ ಒಡೆಯರಾದ ಕ್ರಿಸ್ತ ಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ! ನಾನು ಹಗಲಿರುಳೂ ನನ್ನ ಪ್ರಾರ್ಥನೆಯಲ್ಲಿ ತಪ್ಪದೆ ನಿನ್ನನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಪೂರ್ವಿಕರ ಹಾಗೆ ಶುದ್ಧ ಮನಸ್ಸಾಕ್ಷಿಯಿಂದ ನನ್ನ ಆರಾಧ್ಯ ದೇವರಿಗೆ ನಿನ್ನ ವಿಷಯವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ನಿನ್ನ ಮೇಲೆ ಹಸ್ತನಿಕ್ಷೇಪಮಾಡಿ ಪ್ರಾರ್ಥಿಸಿದಾಗ ನೀನು ಪಡೆದಂಥ ವರದಾನವನ್ನು ಪುನಃ ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಿಸುತ್ತೇನೆ. ದೇವರು ನಮಗೆ ಪ್ರದಾನಮಾಡಿರುವ ಪವಿತ್ರಾತ್ಮ ನಮ್ಮನ್ನು ಹೇಡಿಗಳನ್ನಾಗಿ ಮಾಡುವುದಿಲ್ಲ ; ನಮ್ಮಲ್ಲಿ ದೈವೀಶಕ್ತಿ, ಪ್ರೀತಿ ಹಾಗೂ ಸಂಯಮಗಳು ಪ್ರವರ್ಧಿಸುವಂತೆ ಮಾಡುತ್ತಾರೆ. ಆದುದರಿಂದ ಕ್ರಿಸ್ತ ಯೇಸುವಿಗೆ ಸಾಕ್ಷಿಯಾಗಿರಲು ನಾಚಬೇಡ. ಅವರಿಗಾಗಿ ಬಂಧಿಯಾಗಿರುವ ನನ್ನ ವಿಷಯದಲ್ಲೂ ನಾಚಬೇಡ. ದೇವರ ಶಕ್ತಿಯನ್ನು ಆಶ್ರಯಿಸಿ ನನ್ನೊಡನೆ ಶುಭಸಂದೇಶಕ್ಕೊಸ್ಕರ ನಿನ್ನ ಪಾಲಿನ ಶ್ರಮವನ್ನು ಅನುಭವಿಸು. ನಾವು ಸ್ವಂತ ಸತ್ಕಾರ್ಯಗಳಿಂದಲ್ಲ, ದೇವರ ಯೋಜನೆ ಹಾಗೂ ಅನುಗ್ರಹದಿಂದಲೇ ಜೀವೋದ್ಧಾರ ವರವನ್ನು ಪಡೆದಿದ್ದೇವೆ; ದೇವರ ಪ್ರಜೆಗಳೆನಿಸಿಕೊಂಡಿದ್ದೇವೆ. ಈ ಅನುಗ್ರಹವನ್ನು ಕ್ರಿಸ್ತ ಯೇಸುವಿನಲ್ಲಿ ಅನಾದಿಯಿಂದಲೇ ನಮಗೆ ಕೊಡಲಾಯಿತು. ಆ ಕಾಲದಲ್ಲೂ ನಮ್ಮ ಉದ್ಧಾರಕ ಕ್ರಿಸ್ತ ಯೇಸುವಿನ ಪ್ರತ್ಯಕ್ಷದ ಮೂಲಕ ಅದನ್ನು ಬಹಿರಂಗಪಡಿಸಲಾಗಿದೆ. ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ ಅಮರ ಜೀವವನ್ನು ಶುಭಸಂದೇಶದ ಮೂಲಕ ಬೆಳಕಿಗೆ ತಂದವರು ಯೇಸುವೇ. ಈ ಶುಭಸಂದೇಶವನ್ನು ಸಾರುವುದಕ್ಕೇ ಎಂದು ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಬೋಧಕನನ್ನಾಗಿಯೂ ಶಿಕ್ಷಕನನ್ನಾಗಿಯೂ ನೇಮಿಸಿದ್ದಾರೆ. ಇದಕ್ಕಾಗಿಯೇ ಇಷ್ಟೆಲ್ಲಾ ಕಷ್ಟಕಾರ್ಪಣ್ಯಗಳನ್ನು ನಾಚಿಕೆಪಡದೆ ಅನುಭವಿಸುತ್ತಿದ್ದೇನೆ. ನಾನು ಯಾರಲ್ಲಿ ವಿಶ್ವಾಸವನ್ನಿಟ್ಟಿದ್ದೇನೆ ಎಂದು ಚೆನ್ನಾಗಿ ಬಲ್ಲೆ. ನನ್ನ ವಶಕ್ಕೆ ಒಪ್ಪಿಸಿರುವುದನ್ನು ಆ ದಿನದವರೆಗೂ ಕಾಪಾಡುವುದಕ್ಕೆ ಅವರು ಶಕ್ತರು. ಆದ್ದರಿಂದ ನಾನು ಪೂರ್ಣ ಭರವಸೆಯಿಂದ ಇದ್ದೇನೆ.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌻✝️🌻

*ಕೀರ್ತನೆ 123: 1-3. v. 1*

*ಶ್ಲೋಕ: ನನ್ನ ಕಣ್ಣುಗಳನು ಪ್ರಭೂ, ನಿನ್ನ ಕಡೆಗೆ ಎತ್ತಿರುವೆ.*

1. ಸ್ವರ್ಗದಲಿ ಆಸೀನಾಗಿರುವ ಪ್ರಭೂ,|
ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ|
ದಾಸನ ಕಣ್ಣು ಯಜಮಾನನತ್ತ||
*ಶ್ಲೋಕ*

2. ದಾಸಿಯ ಕಣ್ಣು ಯಜಮಾನಿಯತ್ತ|
ನನ್ನ ಕಣ್ಣು ಪ್ರಭು ದೇವನತ್ತ|
ಆತನ ಕಟಾಕ್ಷವನು ನಿರೀಕ್ಷಿಸುತ್ತಾ||
*ಶ್ಲೋಕ*

🌻✝️🌻

*ಘೋಷಣೆ*
*ಕೀರ್ತನೆ 119: 34*

*ಅಲ್ಲೆಲೂಯ, ಅಲ್ಲೆಲೂಯ!*
ನೀಡೆನಗೆ ನಿನ್ನ ಶಾಸ್ತ್ರದ ಅರಿವನು | ಪೂರ್ಣ ಮನದಿಂದ ಆಚರಿಸುವೆನು ಅದನು||
*ಅಲ್ಲೆಲೂಯ!*

🌻✝️🌻

*ಶುಭಸಂದೇಶ ವಾಚನ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12: 18-27*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ."*

ಆ ಕಾಲದಲ್ಲಿ ಸದ್ಧುಕಾಯರು ಯೇಸುವಿನ ಬಳಿಗೆ ಬಂದರು. ಸತ್ತ ಮೇಲೆ ಪುನರುತ್ಥಾನ ಇಲ್ಲವೆಂಬುದು ಇವರ ಅಭಿಮತ. ಇವರು ಯೇಸುವನ್ನು, "ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೇ? ಒಮ್ಮೆ ಏಳು ಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ವಿವಾಹವಾಯಿತು. ಅವನು ಮಕ್ಕಳಿಲ್ಲದೆ ಮೃತನಾದುದರಿಂದ ಎರಡೆಯವನು ಅವನ ಹೆಂಡತಿಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸಾವನಪ್ಪಿದ. ಮೂರನೆಯವನಿಗೂ ಇದೇ ಗತಿಯಾಯಿತು. ಅನಂತರ, ಉಳಿದವರೂ ಒಬ್ಬರ ಬಳಿಕ ಇನ್ನೊಬ್ಬರು ಆಕೆಯನ್ನು ಮದುವೆ ಮಾಡಿಕೊಂಡು, ಸಂತಾನವಿಲ್ಲದೆ ಸತ್ತುಹೋದರು. ಕಡೆಗೆ ಆ ಸ್ತ್ರೀಯೂ ಮರಣ ಹೊಂದಿದಳು. ಈಗ ಹೇಳಿ, ಪುನರುತ್ಥಾನದ ದಿನದಲ್ಲಿ, ಆಕೆ ಯಾರ ಹೆಂಡತಿ ಎನಿಸಿಕೊಳ್ಳುವಳು? ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದರಲ್ಲವೇ?" ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು, "ನಿಮ್ಮದು ಎಂಥಾ ತಪ್ಪು ಅಭಿಪ್ರಾಯ! ಪವಿತ್ರ ಗ್ರಂಥವನ್ನಾಗಲೀ, ದೇವರ ಶಕ್ತಿಯನ್ನಾಗಲೀ ನೀವು ಅರ್ಥಮಾಡಿಕೊಂಡಿಲ್ಲ. ಸತ್ತವರು ಪುನರುತ್ಥಾನವಾದ ಮೇಲೆ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಸ್ವರ್ಗದ ದೇವದೂತರಂತೆ ಇರುತ್ತಾರೆ. ಇದಲ್ಲದೆ ಸತ್ತವರು ಪುನರುತ್ಥಾನವಾಗುವ ವಿಷಯದಲ್ಲಿ ಹೇಳುವುದಾದರೆ: 'ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು' ಎಂದು ದೇವರು ಮೋಶೆಗೆ ಹೇಳಿದ್ದನ್ನು ಮೋಶೆಯ ಗ್ರಂಥದಲ್ಲಿ, 'ಉರಿಯುವ ಪೊದೆ'ಯ ಪ್ರಸ್ತಾಪವಿರುವ ಭಾಗದಲ್ಲಿ, ನೀವು ಓದಿರಬೇಕಲ್ಲವೇ? ದೇವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ, ನಿಮ್ಮ ಅಭಿಪ್ರಾಯ ತೀರಾ ತಪ್ಪಾಗಿದೆ " ಎಂದರು.

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

5 days ago | [YT] | 21

Krista Dani

0️⃣2️⃣-0️⃣6️⃣-2️⃣6️⃣
*ಜೂನ್*
0️⃣2️⃣
*ಮಂಗಳವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಬತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 251)*
*ಪೂಜಾವಿಧಿ ವರ್ಷ 2*
*ಕೀರ್ತನಾ ಮಂಜರಿ:ವಾರ 1*
*ಪೂಜಾವಸ್ತ್ರ ಹಸಿರು*
*ಸಂತ*
*ಮಾರ್ಸೆಲಿನಸ್*
*ಮತ್ತು*
*ಸಂತ ಪೀಟರ್*
*(ರಕ್ತಸಾಕ್ಷಿಗಳು)*
*(ಮರಣ 0304 ರೋಮ್)*
🟩🌻🙏✝️🙏🌻 🟩

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೇತ್ರನು ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 3: 11-15, 17-18*

*"ನಾವಾದರೋ, ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು."*

ಸಹೋದರರೇ, ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ದರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವರ ಆ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದುಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು. ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರುನೋಡುತ್ತಿರುವೆವು. ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ. ನಮ್ಮ ಪ್ರಭುವಿನ ದೀರ್ಘ ಶಾಂತಿ ಹಾಗು ಸಹನೆ ನಮ್ಮ ಜೀವೋದ್ಧಾರಕ್ಕಾಗಿಯೇ ಎಂದು ತಿಳಿದುಕೊಳ್ಳಿ. ನಮ್ಮ ಪ್ರಿಯ ಸಹೋದರನಾದ ಪೌಲನೂ ಸಹ ತನಗೆ ದೇವರಿತ್ತ ಜ್ಞಾನದ ಪ್ರಕಾರ ಹೀಗೆಯೇ ನಿಮಗೆ ಬರೆದಿದ್ದಾನೆ. ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರ ವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ. ನಮ್ಮ ಪ್ರಭು ಮತ್ತು ಉದ್ಧಾರಕರಾದ ಯೇಸು ಕ್ರಿಸ್ತರ ಅನುಗ್ರಹದಲ್ಲೂ ಅವರನ್ನು ಕುರಿತ ಜ್ಞಾನದಲ್ಲೂ ನೀವು ಅಭಿವೃದ್ಧಿ ಹೊಂದಿರಿ. ಅವರಿಗೆ ಈಗಲೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ! ಆಮೆನ್.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌻✝️🌻

*ಕೀರ್ತನೆ*
*90: 2, 3-4, 10, 14, 16. v. 1*

*ಶ್ಲೋಕ: ಪ್ರಭೂ, ತಲತಲಾಂತರಕ್ಕೆ ಶ್ರೀ ನಿವಾಸ ನೀನೆಮಗೆ |*

1. ಬೆಟ್ಟಗಳು ಹುಟ್ಟುವುದಕೆ ಮುಂಚಿನಿಂದ|
ಭೂದೇಶಗಳು ಆಗುವುದಕ್ಕೆ ಮೊದಲಿಂದ|
ನೀನೆಮಗೆ ದೇವರು ಯುಗಯುಗಗಳಿಂದ||
*ಶ್ಲೋಕ*

2. 'ನರಪುತ್ರರೇ, ಮರಳಿ ಮಣ್ಣಿಗೆ ಸೇರಿರಿ' ಎನ್ನುತಿಹೆ|
ನಿನ್ನ ದೃಷ್ಟಿಯಲ್ಲಿ ಪ್ರಭೂ, ಸಹಸ್ರ ವರುಷ|
ಇರುಳಿನೊಂದು ಜಾವ, ಗತಿಸಿಹೋದ ಒಂದು ದಿವಸ||
*ಶ್ಲೋಕ*

3. ನಮ್ಮ ಆಯುಷ್ಕಾಲ ಎಪ್ಪತ್ತು ವರುಷ|
ಹೆಚ್ಚಾಗಿದ್ದರೆ ಬಲ ಎಂಭತ್ತು ವರುಷ||
*ಶ್ಲೋಕ*

4. ಉದಯದಲೆ ತೋಯಿಸೆಮ್ಮನು ನಿನ್ನ ಕೃಪೆಯಿಂದ|
ಹರ್ಷಿಸಿ ಆನಂದಿಸುವೆವು ಆಗ ದಿನದಾದ್ಯಂತ||
ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ|
ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ||
*ಶ್ಲೋಕ*

🌻✝️🌻

*ಘೋಷಣೆ ಕೀರ್ತನೆ 119: 27*

*ಅಲ್ಲೆಲೂಯ, ಅಲ್ಲೆಲೂಯ!*
ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳನು ನಾ ಧ್ಯಾನಿಸುವೆನಯ್ಯಾ||
*ಅಲ್ಲೆಲೂಯ!*

🌻✝️🌻

*ಶುಭಸಂದೇಶ ವಾಚನ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ: 12: 13-17*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ."*

ಆ ಕಾಲದಲ್ಲಿ ಯೆಹೂದ್ಯ ಮುಖಂಡರು ಯೇಸುವನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವರು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, "ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆ ಕೊಡದವರು, ಸತ್ಯಕ್ಕನುಸಾರ ದೈವ ಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?" ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, "ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ," ಎಂದರು. ಅವರೊಂದು ನಾಣ್ಯವನ್ನು ತಂದರು. "ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?" ಎಂದು ಯೇಸು ಕೇಳಿದರು. ಅದಕ್ಕೆ ಅವರು "ಅವು ರೋಮ್ ಚಕ್ರವರ್ತಿಯವು," ಎಂದರು. ಆಗ ಯೇಸು, "ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ," ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

6 days ago | [YT] | 21

Krista Dani

0️⃣1️⃣-0️⃣6️⃣-2️⃣6️⃣
*ಜೂನ್*
0️⃣1️⃣
*ಸೋಮವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಬತ್ತನೆಯ ವಾರ*
*(ವಾ,ಗ್ರ. ಭಾಗ-2. ಪುಟ 247)*
*ಪೂಜಾವಿಧಿ ವರ್ಷ 2*
*ಕೀರ್ತನಾ ಮಂಜರಿ;ವಾರ 1*
*ಪೂಜಾವಸ್ತ್ರ ಕೆಂಪು*
*ಸಂತ ಜಸ್ಟಿನ್*
*(ರಕ್ತಸಾಕ್ಷಿ)*
*(ವಯಸ್ಸು - 65)*
*(0100-0165)*
🟥🌺🙏✝️🙏🌺 🟥

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಪೇತ್ರನು ಬರೆದ ಎರಡನೆಯ ಪತ್ರದಿಂದ ಇಂದಿನ ವಾಚನ 1:2-7*

*"ದೈವಿಕ ಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ."*

ಸಹೋದರರೇ, ದೇವರ ಮತ್ತು ಪ್ರಭು ಯೇಸು ಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಜಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿ ಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ! ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯ ಶಕ್ತಿಯಿಂದ ಪಡೆದಿದ್ದೇವೆ. ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕ ಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ. ಈ ಕಾರಣ, ನೀವು ಪೂರ್ಣಾಶಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ. ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಬಕ್ತಿಯನ್ನು ಕೂಡಿಸಿರಿ. ಈ ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೊದರ ಸ್ನೇಹಕ್ಕೆ ಪ್ರೀತಿಯನ್ನು ಕೂಡಿಸಿರಿ.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌺✝️🌺

*ಕೀರ್ತನೆ:*
*91:1-2,14-16,v.2*

*ಶ್ಲೋಕ: ಪ್ರಭುವೇ ದುರ್ಗವೂ ನಾ ನಂಬಿದ ದೇವನು |*

1. ಪರಾತ್ಪರ ಪ್ರಭುವಿನ ಮೊರೆ ಹೊಕ್ಕಿರುವವನು|
ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನು||
ನಾನಾತನಿಗೆ 'ನೀನೇ ನನ್ನ ರಕ್ಷಕನೂ ದುರ್ಗವೂ|
ನಾ ನಂಬಿದ ದೇವನೂ' ಎನ್ನುವೆನು||
*ಶ್ಲೋಕ*

2. ನನ್ನ ಭಕ್ತನಾದ್ದರಿಂದ ವಿಮೋಚಿಸುವೆನು ಅವನನು|
ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು|
ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು||
*ಶ್ಲೋಕ*

3. ಸಂಕಟದೊಳು ಅವನ ಸಂಗಡವಿರುವೆನು|
ದೀರ್ಘಾಯುಸ್ಸನ್ನಿತ್ತು ತೃಪ್ತಿಪಡಿಸುವೆನು|
ನಾನು ನೀಡುವ ಮುಕ್ತಿಯವನಿಗೆ ಮನಗಾಣಿಸುವೆನು||
*ಶ್ಲೋಕ*

🌺✝️🌺

*ಘೋಷಣೆ: ಕೀರ್ತನೆ 119: 18*

*ಅಲ್ಲೆಲೂಯ, ಅಲ್ಲೆಲೂಯ!*
ನಿನ್ನ ಶಾಸ್ತ್ರದ ಮಹಿಮೆಯನು ಅರಿಯುವಂತೆ | ನನ್ನ ಕಣ್ಗಳಿಂದ ನೀ ತೆಗೆದುಬಿಡು ಅಂಧತೆ ||
*ಅಲ್ಲೆಲೂಯ!*

🌺✝️🌺

*ಶುಭಸಂದೇಶ ವಾಚನ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 12: 1-12*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ಅವನ ಮುದ್ದುಮಗನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು."*

ಆ ಕಾಲದಲ್ಲಿ ಯೇಸು ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: "ಒಬ್ಬನು ದ್ರಾಕ್ಷಿಯ ತೋಟ ಒಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟು ಹೋದ. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಆದರೆ ಅವರು ಆ ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನ ಮಾಡಿ ಕಳುಹಿಸಿದರು. ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದು ಹಾಕಿದರು. ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದು ಮಗನೊಬ್ಬನೇ. "ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು," ಎಂದು ಭಾವಿಸಿ, ಕಟ್ಟಗಡೆಗೆ ಆ ಯಜಮಾನ ತನ್ನ ಮಗನನ್ನೇ ಅವರ ಬಳಿಗೆ ಕಳುಹಿಸಿದ. ಆದರೆ ಆ ಗೇಣಿದಾರರು, 'ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಆಗ ಈ ಆಸ್ತಿ ನಮ್ಮದಾಗುವುದು,' ಎಂದು ಒಳಸಂಚು ಹೂಡಿ, ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಆ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ: 'ಮನೆಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು; ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ!' ಎಂಬ ವಾಕ್ಯವನ್ನು ನೀವು ಓದಲಿಲ್ಲವೇ?" ಎಂದರು. ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನ ಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟು ಹೋದರು.

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

1 week ago | [YT] | 17

Krista Dani

3️⃣1️⃣-0️⃣5️⃣-2️⃣6️⃣
*ಮೇ*
3️⃣1️⃣
*ಭಾನುವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಒಂಭತ್ತನೇ ಭಾನುವಾರ*
*(ವಾ,ಗ್ರ. ವರ್ಷ-. ಪುಟ )*
*ಪೂಜಾವಿಧಿ ಮಹೋತ್ಸವ*
*ಕೀರ್ತನಾ ಮಂಜರಿ;ಹಬ್ಬ*
*ಪೂಜಾವಸ್ತ್ರ ಬಿಳಿ*
*ಪರಮ ತ್ರಿತ್ವದ ಮಹೋತ್ಸವ*
🟪🌹🙏✝️🙏🌹🟪

*📖ದೈವವಾಕ್ಯದ ವಿಧಿ*

*"ಪಿತನಿಗೂ ಸುತನಿಗೂ ಪವಿತ್ರಾತ್ಮರಿಗೂ ಮಹಿಮೆ ಸಲ್ಲಲಿ"*

*ಮೊದಲನೆಯ ವಾಚನ*

*🛐ವಿಮೋಚನಾ ಕಾಂಡದಿಂದ ಇಂದಿನ ಮೊದಲನೆಯ ವಾಚನ 34: 4-6,8-9*

*"ಸರ್ವೇಶ್ವರನು ಕರುಣಾಮಯನು, ದಯಾಳು ದೇವರು."*

ಮೋಶೆ ಮೊದಲಿದ್ದ ಹಲಗೆಗಳಂತೆ ಎರಡು ಕಲ್ಲಿನ ಹಲಗೆಗಳನ್ನು ಸಿದ್ಧಪಡಿಸಿಕೊಂಡು, ಸರ್ವೇಶ್ವರನ ಅಪ್ಪಣೆಯ ಮೇರೆಗೆ ಬೆಳಿಗ್ಗೆ ಎದ್ದು ಆ ಎರಡು ಕಲ್ಲಿನ ಹಲಗೆಗಳನ್ನು ಕೈಯಲ್ಲಿ ತೆಗೆದುಕೊಂಡು ಸೀನಾಯಿ ಬೆಟ್ಟವನ್ನು ಹತ್ತಿದನು. ಆಗ ಸರ್ವೇಶ್ವರಸ್ವಾಮಿ ಮೇಘಾವ್ರತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: “ಸರ್ವೇಶ್ವರನು; ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ಥನು. ಕೂಡಲೇ ಮೋಶೆ ನೆಲದಮೇಲೆ ಅಡ ಬಿದ್ದು ನಮಸ್ಕರಿಸಿ, “ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌹✝️🌹

*ಕೀರ್ತನೆ*
*1: 29-34, v. 29*

*ಶ್ಲೋಕ: ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು*

1. ನಮ್ಮ ಪೂರ್ವಜರ ದೇವರಾದ ಸರ್ವೇಶ್ವರಾ|
ನೀವು ಪರಮ ಪೂಜ್ಯರು, ಎಂದೆಂದಿಗೂ ಮಹೋನ್ನತರು||
ಮಹಿಮಾಯುತವಾದ ನಿಮ್ಮ ನಾಮ ಸ್ತುತ್ಯಾರ್ಹವಾದುದು|
ಪರಮ ಪೂಜ್ಯವಾದುದು ಎಂದೆಂದಿಗೂ ಘನತರವಾದುದು||
*ಶ್ಲೋಕ*

2. ಪರಮ ವೈಭವದಿಂದ ಕೂಡಿದ ಮಂದಿರದಲಿ|
ನೀವು ಸ್ತುತಿಸ್ತೋತ್ರಕ್ಕೆ ಪಾತ್ರರು|
ನೀವು ಪರಮಪೂಜ್ಯರು ಎಂದೆಂದಿಗೂ ಮಹೋನ್ನತರು||
ಸಾಗರಾದಿಗಳನ್ನು ಸಮೀಕ್ಷಿಸುವ ನಿಮಗೆ ಸ್ತೋತ್ರ|
ನೀವು ಪರಮ ಪೂಜ್ಯರು, ಎಂದೆಂದಿಗೂ ಮಹೋನ್ನತರು||
*ಶ್ಲೋಕ*

3. ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ|
ಮಂಡಿಸಿರುವ ನಿಮಗೆ ಸ್ತೋತ್ರ||
ನೀವು ಪರಮ ಪೂಜ್ಯರು, ಎಂದೆಂದಿಗೂ ಮಹೋನ್ನತರು|
ಗಗನ ಮಂಡಲದಲ್ಲಿ ಸ್ತೋತ್ರಪಾತ್ರರು|
ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನಿತ್ವರು||
*ಶ್ಲೋಕ*

🌹✝️🌹

*ಎರಡನೆಯ ವಾಚನ*

*🛐ಪೌಲನು ಕೊರಿಂಥಿಯರಿಗೆ ಬರೆದ ಎರಡನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 13: 11-13*

*"ನಮ್ಮ ಪ್ರಭು ಯೇಸುಕ್ರಿಸ್ತರ ವರಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ."*

ಸಹೋದರರೇ, ಸಂತೋಷದಿಂದಿರಿ, ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿ ಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ. ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ಕೃಪಾವರವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌹✝️🌹

*ಘೋಷಣೆ*

*ಅಲ್ಲೆಲೂಯ, ಅಲ್ಲೆಲೂಯ!*
ಪಿತನಿಗೂ ಸುತನಿಗೂ ಪವಿತ್ರಾತ್ಮರಿಗೂ ಮಹಿಮೆಯಾಗಲಿ ! ಆದಿಯಲ್ಲಿ ಇದ್ದ ಹಾಗೆ ಈಗಲೂ ಯುಗಯುಗಾಂತರಕ್ಕೂ !
*ಅಲ್ಲೆಲೂಯ!*

🌹✝️🌹

*ಶುಭಸಂದೇಶ*

*✝️ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3: 16-18*

*ಪ್ರಭೂ ನಿಮಗೆ ಮಹಿಮೆ ಸಲ್ಲಲಿ*

*"ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು."*

ಆ ಕಾಲದಲ್ಲಿ ಯೇಸು ನಿಕೋದೇಮನಿಗೆ ಇಂತೆಂದರು: "ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯ ಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸ್ವವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ."

*ಪ್ರಭುವಿನ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

1 week ago | [YT] | 21

Krista Dani

3️⃣0️⃣-0️⃣5️⃣-2️⃣6️⃣
*ಮೇ*
3️⃣0️⃣
*ಶನಿವಾರ*
*ಪವಿತ್ರ ಬೈಬಲ್ ದಿನಚರಿ*
*ಸಾಧಾರಣ ಕಾಲದ*
*ಎಂಟನೆಯ ವಾರ*
*(ವಾ,ಗ್ರ. ಭಾಗ-2. ಪುಟ 235)*
*ಪೂಜಾವಿಧಿ ವರ್ಷ- 2*
*ಕೀರ್ತನಾ ಮಂಜರಿ; ವಾರ 2*
*ಪೂಜಾವಸ್ತ್ರ ಹಸಿರು*
*ಆರ್ಕ್ ನ*
*ಸಂತ ಜೋನ್*
*(ವಯಸ್ಸು - 19)*
*(1412-1431)*
🟨🌻🙏✝️🙏🌻🟨

*📖ದೈವವಾಕ್ಯದ ವಿಧಿ*

*ಮೊದಲನೆಯ ವಾಚನ*

*🛐ಯೂದನ ಗ್ರಂಥದಿಂದ ಇಂದಿನ ವಾಚನ 1: 20-25*

*"ಪಾಪದಲ್ಲಿ ಎಡವಿ ಬೀಳದಂತೆ ಕಾಪಾಡಲು, ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ದೇವರು ಶಕ್ತರಾಗಿದ್ದಾರೆ."*

ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿವ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂದಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ. ನಿತ್ಯ ಜೀವವನ್ನು ದಯಪಾಲಿಸುವ ಕರುಣಾಮಯ ಪ್ರಭು ಯೇಸು ಕ್ರಿಸ್ತರನ್ನು ಎದುರು ನೋಡುತ್ತಾ ದೇವರ ಪ್ರೀತಿಯಲ್ಲಿ ನೆಲಗೊಂಡಿರಿ. ಸಂಶಯಪಡುವವರಿಗೆ ಸಹೃದಯದಿಂದ ನೆರವಾಗಿರಿ. ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ. ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವ, ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ಶಕ್ತರಾಗಿರುವ, ನಮ್ಮ ಉದ್ಧಾರಕರಾದ ಏಕೈಕ ದೇವರಿಗೆ ನಮ್ಮ ಪ್ರಭು ಯೇಸು ಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಅಧಿಪತ್ಯ, ಅಧಿಕಾರ ಆಧಿಯಲ್ಲಿ ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲಿ! ಆಮೆನ್.

*ಪ್ರಭುವಿನ ವಾಕ್ಯ*
*ದೇವರಿಗೆ ಕೃತಜ್ಞತೆ ಸಲ್ಲಲಿ*

🌻✝️🌻

*ಕೀರ್ತನೆ*
*(63: 1, 2-3, 4-5, v. 1*

*ಶ್ಲೋಕ: ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ|*

1. ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ|
ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆವಂತೆ||
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ|
ನಿನ್ನ ಮಂದಿರದಲಿ ನನಗಾದ ದರ್ಶನದಲಿ||
*ಶ್ಲೋಕ*

2. ನಿನ್ನ ಶಕ್ತಿ ಪ್ರತಿಭೆಯನ್ನು ಕಂಡಿರುವೆನಲ್ಲಿ|
ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ||
ಎಡೆಬಿಡದೆ ಮಾಳ್ವುದು ನನ್ನೀ ತುಟಿ ನಿನ್ನ ಸ್ತುತಿ|
ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ|
ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ||
*ಶ್ಲೋಕ*

3. ಮೃಷ್ಟಾನ್ನ ತಿಂದಂತೆ ಎನ್ನ ಮನ ಸಂತೃಪ್ತ|
ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ||
*ಶ್ಲೋಕ*

🌻✝️🌻

*ಘೋಷಣೆ*
*(ಕೀರ್ತನೆ 119: 27)*

*ಅಲ್ಲೆಲೂಯ, ಅಲ್ಲೆಲೂಯ!*
ನಿನ್ನ ನಿಯಮಗಳ ಪಥವೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳನು ನಾ ಧ್ಯಾನಿಸುವೆನಯ್ಯಾ ||
*ಅಲ್ಲೆಲೂಯ!*

🌻✝️🌻

*ಶುಭಸಂದೇಶ ವಾಚನ*

*✝️ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 11: 27-33*

*ಪ್ರಭು, ನಿಮಗೆ ಮಹಿಮೆ ಸಲ್ಲಲಿ*

*"ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ?"*

ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು, "ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು?" ಎಂದು ಕೇಳಿದರು. ಅದಕ್ಕೆ ಯೇಸು, "ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. 'ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ?' ಉತ್ತರಕೊಡಿ," ಎಂದರು. ಇದನ್ನು ಕೇಳಿದ ಅವರು ತಮ್ಮತಮ್ಮೊಳಗೇ ತರ್ಕ ಮಾಡುತ್ತಾ, "ದೇವರಿಂದ ಬಂದಿತೆಂದು ಹೇಳಿದರೆ, 'ಹಾಗದರೆ ನೀವೇಕೆ ಅವನನ್ನು ನಂಬಲಿಲ್ಲ?' ಎಂದು ಕೇಳುವನು. 'ಮನುಷ್ಯರಿಂದ ಬಂದಿತು' ಎಂದು ಹೇಳೋಣ ಎಂದರೆ ಅದೂ ಆಗದು, ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, "ನಮಗೆ ಗೊತ್ತಿಲ್ಲ" ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, "ಹಾಗಾದರೆ ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ," ಎಂದರು.

*ಪ್ರಭುಕ್ರಿಸ್ತರ ಶುಭಸಂದೇಶ*
*ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ*

ಆಮೆನ್

1 week ago | [YT] | 21